You are here
ಶ್ರೀ ಶ್ರೀ ರವಿಶಂಕರ್ ಗುರೂಜಿ ಹೊಸ ಅಂಕಣ

ಶ್ರೀ ಶ್ರೀ ರವಿಶಂಕರ್ ಗುರೂಜಿ ಹೊಸ ಅಂಕಣ

ಶ್ರೀ ಶ್ರೀ ರವಿಶಂಕರ್
ಜೀವನ ದರ್ಶಿನಿ

ಮಾನವ ದೇಹವು ಬಹಳ ಅಮೂಲ್ಯವಾದದ್ದು. ದಿನನಿತ್ಯದ ಜೀವನದಲ್ಲಿ ಕೆಲಸವನ್ನು ಮಾಡುತ್ತಿರುವಾಗ ಶಕ್ತಿಯನ್ನು ಕಳೆದುಕೊಳ್ಳುತ್ತೀರಿ. ಶಕ್ತಿಯು ಕೆಳಮಟ್ಟಕ್ಕಿಳಿದಾಗ ಮನಸ್ಸೂ ಇಳಿಮುಖವಾಗುತ್ತದೆ. ಇದನ್ನು ಅನುಭವಿಸಿದ್ದೀರೆ ? ಬಹಳಷ್ಟು ಸಲ, ’ನನ್ನ ಮನಸ್ಸೇಕೆ ಕೆಳಗುಂದುತ್ತಿದೆ ?’ ’ಯಾವುದೂ ಆಸಕ್ತಕರವಾಗಿ ಕಾಣುತ್ತಿಲ್ಲ, ನನಗೆ ಬಹಳ ಖಿನ್ನತೆಯ ಅನುಭವಾಗುತ್ತಿದೆ’ ಎಂದುಕೊಳ್ಳುತ್ತೀರಿ. ಮನಸ್ಸು ಇಳಿಮುಖವಾಗಿರುವುದನ್ನು ಸ್ಪಷ್ಟವಾಗಿ ಅನುಭವಿಸುತ್ತೀರಿ.

ಇದಕ್ಕೆ ಹಲವಾರು ಕಾರಣಗಳಿವೆ :
1) ಕಾಲ – ಎಲ್ಲರ ಜೀವನ ಚಕ್ರದಲ್ಲೂ ಒಂದು ನಿರ್ದಿಷ್ಟವಾದ ಕಾಲ ಬರುತ್ತದೆ. ಆಗ ವಿನಾಕಾರಣ ಮನಸ್ಸಿನ ಶಕ್ತಿ ಕುಂದುತ್ತದೆ.

2) ಬಹಳ ಆಲೋಚಿಸುವುದು, ಬಹಳ ಬಯಕೆಗಳು. ಮನಸ್ಸು ಬಹಳ ಮಹತ್ವಾಕಾಂಕ್ಷೆಗಳನ್ನು, ಬಹಳ ಬಯಕೆಗಳನ್ನು ಹೊಂದಿದಾಗ ಇದರಿಂದ ಖಂಡಿತವಾಗಿಯೂ ಖಿನ್ನತೆಯುಂಟಾಗುತ್ತದೆ. ಮನಸ್ಸು ತನ್ನ ಎಲ್ಲಾ ಶಕ್ತಿಯನ್ನೂ ಆಲೋಚಿಸುವುದರಲ್ಲಿ ಕನಸ್ಸನ್ನು ಕಾಣುವುದರಲ್ಲಿ ಕಳೆದುಬಿಡುವುದರಿಂದ ಮನಸ್ಸು ಇಳಿಮುಖವಾಗುತ್ತದೆ. ವಿಪರೀತ ಬಯಕೆಗಳನ್ನು ಹೊಂದುವುದರಿಂದ ಮನಸ್ಸಿನ ಬಲ ಕ್ಷೀಣವಾಗುತ್ತಾ ಹೋಗುತ್ತದೆ.
ಆದ್ದರಿಂದ ಖಿನ್ನತೆಯನ್ನು ಸದೆ ಬಡಿಯಲು ವೈರಾಗ್ಯ ಬಹಳ ಅವಶ್ಯಕ. ವೈರಾಗ್ಯವಿದ್ದರೆ ನಮ್ಮಲ್ಲಿ ಖಿನ್ನತೆ ಉಂಟಾಗುವುದಿಲ್ಲ. ವೈರಾಗ್ಯದ ಅಭಾವದಿಂದ ಖಿನ್ನತೆಯುಂಟಾಗುತ್ತದೆ.

3) ದೇಹದಲ್ಲಿ ಶಕ್ತಿಯ ಮಟ್ಟ ಕಡಿಮೆಯಾಗಿದ್ದಾಗ, ದೇಹವು ಕೃಶವಾಗಿದ್ದಾಗ ಅಥವಾ ಖಾಯಿಲೆ ಬಂದಾಗ ಮನಸ್ಸು ಇಳಿಮುಖವಾಗುತ್ತದೆ. ದೇಹದ ಜೀವಸತ್ವ, ದ್ರವ್ಯದ ಮಟ್ಟ ಕಡಿಮೆಯಾದಾಗಲೂ ಮನಸ್ಸು ಕುಂದುತ್ತದೆ. ಖಾಯಿಲೆಯಿಂದಾಗಿ ಅಥವಾ ತಪ್ಪಾದ ಆಹಾರ ಸೇವನೆಯಿಂದಾಗಿಯೂ ಹೀಗಾಗುತ್ತದೆ.
ಕೆಲವೊಮ್ಮೆ ನೀವು ಸೇವಿಸುವ ಆಹಾರ ನಿಮಗೆ ಒಗ್ಗುವುದಿಲ್ಲ ಅಥವಾ ಬಹಳವಾಗಿ ತಿನ್ನುತ್ತೀರಿ. ಹೀಗಾದಾಗಲೂ ಖಿನ್ನತೆಯುಂಟಾಗುತ್ತದೆ. ಇದೊಂದು ಚಕ್ರದಂತೆ. ಖಿನ್ನತೆಯ ಅನುಭವವಾಗುತ್ತಿದೆಯೆಂದು ಜನರು ಹೆಚ್ಚಾಗಿ ತಿನ್ನುತ್ತಾರೆ. ನಂತರ ಬಹಳ ತಿಂದುದಕ್ಕಾಗಿ ಖಿನ್ನರಾಗುತ್ತಾರೆ.
ನಿಮಗೆ ಬಹಳ ಕಡಿಮೆ ಮಟ್ಟದ ಶಕ್ತಿಯಿದೆ ಅನಿಸಿದಾಗ ಅಥವಾ ಖಿನ್ನತೆಯ ಅನುಭವವಾದಾಗ ಬಹಳ ತಿನ್ನುವುದನ್ನು ನಿಯಂತ್ರಿಸಿ. ಲಘುವಾದ ಆಹಾರವನ್ನು ಅಥವಾ ಹಣ್ಣನ್ನು ತಿನ್ನಿ. ಆಗ ನಿಮ್ಮ ಶಕ್ತಿಯ ಮಟ್ಟ ಹೆಚ್ಚಾಗುತ್ತಿರುವ ಅನುಭವ ನಿಮಗೆ ಬರುತ್ತದೆ. ಬಹಳ ಉಪವಾಸವನ್ನು ಮಾಡಲು ಹೋಗಬೇಡಿ. ಅದುವೂ ಒಳ್ಳೆಯದಲ್ಲ. ಸ್ವಲ್ಪ ಮಟ್ಟಿಗೆ ಉಪವಾಸ ಒಳ್ಳೆಯದು. ಆದ್ದರಿಂದ, ಲಘು ಆಹಾರ ಸೇವನೆಯಿಂದ ಮಾನಸಿಕ ಶಕ್ತಿಯು ಹೆಚ್ಚುತ್ತದೆ.
ಇದರ ಬಗ್ಗೆ ಎಚ್ಚರ ವಹಿಸುವುದು ಮುಖ್ಯ. ನಿಮ್ಮ ಆಹಾರದ ಮೇಲೆ ಗಮನವಿಟ್ಟರೆ, ಸರಿಯಾದ ಆಹಾರದ ಪ್ರಮಾಣವನ್ನು ಸೇವಿಸಿದರೆ, ಸರಿಯಾದ ರೀತಿಯ ಆಹಾರವನ್ನು ಸರಿಯಾದ ಸಮಯಕ್ಕೆ ತಿಂದರೆ ಮಾನಸಿಕ ಶಕ್ತಿಯು ಮೇಲ್ಮುಖವಾಗಿರುತ್ತದೆ.

4) ಕ್ರಿಯಾಶೀಲತೆ ಅಥವಾ ನಿಷ್ಕ್ರಿಯತೆ – ನೀವು ಬಹಳ ಕಾರ್ಯನಿರತರಾಗಿದ್ದರೆ ಖಿನ್ನತೆಗೊಳಗಾಗುತ್ತೀರಿ. ಪೂರ್ಣವಾಗಿ ನಿಷ್ಕ್ರಿಯರಾಗಿದ್ದರೂ ಅಥವಾ ಏನನ್ನೂ ಮಾಡದಿದ್ದರೂ, ಒಂದು ಗುರಿ ಅಥವಾ ಧ್ಯೇಯವನ್ನು ಹೊಂದದೆ ನಿಮಗಾಗಿ ಮಾತ್ರ ಮಾಡಿಕೊಳ್ಳುತ್ತಿದ್ದರೆ, ಸೇವಾ ಭಾವನೆಯನ್ನು ಹೊಂದದಿದ್ದರೆ ಖಂಡಿತವಾಗಿಯೂ ಖಿನ್ನತೆ ಉಂಟಾಗುತ್ತದೆ.
ಆದ್ದರಿಂದಲೇ ಪ್ರಾಚೀನ ಕಾಲದಲ್ಲಿ ಜನರು ಆಶ್ರಮಗಳಿಗೆ ಬಂದು ಏನಾದರೊಂದು ಸೇವೆಯನ್ನು ಮಾಡುತ್ತಿದ್ದರು. ಕೊಳಚೆಪ್ರದೇಶಗಳಿಗೆ ಹೋಗುವುದು, ನೆಲವನ್ನು ಸಾರಿಸುವುದು, ಗಿಡಗಳಿಗೆ ನೀರನ್ನು ಹಾಕುವುದು, ಎಲ್ಲವನ್ನು ಶುದ್ಧವಾಗಿ, ಶುಭ್ರವಾಗಿ ಇಡುತ್ತಿದ್ದರು.

5) ಹಾಡಿ, ನರ್ತಿಸಿ, ಮಂತ್ರೋಚ್ಚಾರಣೆಯನ್ನು ಕೇಳಿ, ಪೂಜೆಯಲ್ಲಿ ಕುಳಿತುಕೊಳ್ಳಿ. ಇದರಿಂದಲೂ ನಿಮ್ಮ ಶಕ್ತಿಯು ಉತ್ಥಾಪಿತವಾಗುತ್ತದೆ. ’ಇಲ್ಲ, ಇದು ಕೆಲಸ ಮಾಡುವುದಿಲ್ಲ’ ಅಥವಾ ’ನನಗೆಷ್ಟು ಬೇಕೊ ಅಷ್ಟು ತಿಂದು ನಂತರ ಬಂದು ಪೂಜೆಯಲ್ಲಿ ಕುಳಿತುಕೊಳ್ಳುತ್ತೇನೆ’ ಎಂದರೆ ಅದೂ ನಡೆಯುವುದಿಲ್ಲ. ’ಇಡೀ ದಿವಸ ಏನನ್ನೂ ಮಾಡದೆಯೆ ಸುಮ್ಮನೆ ಧ್ಯಾನದಲ್ಲಿ ಕುಳಿತುಕೊಳ್ಳುತ್ತೇನೆ’ ಎಂದರೆ ನಿಮ್ಮ ಸಮಯವನ್ನು ಹಾಳು ಮಾಡುತ್ತಿರುವಿರಿ ಅಷ್ಟೆ. ಇದರಿಂದ ನೀವು ಆಳವಾದ ಧ್ಯಾನದೊಳಗೆ ಹೊಕ್ಕಲು ಸಾಧ್ಯವೇ ಇಲ್ಲ. ಚಟುವಟಿಕೆ ಹಾಗೂ ವಿಶ್ರಾಂತಿಯ ನಡುವೆ ಸದಾ ಸಮತೋಲನವನ್ನು ಹೊಂದಿರಬೇಕು. ಸರಿಯಾದ ಆಹಾರದ ಪ್ರಮಾಣ, ಸರಿಯಾದ ಪ್ರಮಾಣದಲ್ಲಿ ಚಟುವಟಿಕೆ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವೆ ಅವಶ್ಯಕ. ಇದನ್ನು ನೀವು ಅನುಸರಿಸಿದರೆ ನಿಮ್ಮಿಂದ ಎಲ್ಲಾ ದುಃಖಗಳೂ ಓಡಿಹೋಗುತ್ತವೆ, ಆಗ ವಿಶ್ವಾತ್ಮಕ ಚೈತನ್ಯದೊಡನೆ ಐಕ್ಯವಾಗುತ್ತೀರಿ. ಯೋಗವಾಗಲು ಪ್ರಾರಂಭವಾಗುತ್ತದೆ ಮತ್ತು ಮುಗುಳ್ನಗಲು ಪ್ರಾರಂಭಿಸುತ್ತೀರಿ!

Related Articles