You are here
ಹಾಕಿದ ತೇಪೆ ಮತ್ತೆ ಹರಿಯದೇ ಇರಲು ಸಾಧ್ಯವೇ?

ಹಾಕಿದ ತೇಪೆ ಮತ್ತೆ ಹರಿಯದೇ ಇರಲು ಸಾಧ್ಯವೇ?

ಸಾಮಾನ್ಯವಾಗಿ ಅಧಿಕಾರದಲ್ಲಿರುವವರು ಅಥವಾ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ನಾಯಕರು ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಾರೆ. ಆದರೆ, ಅಧಿಕಾರದಲ್ಲಿಲ್ಲದ ಪಕ್ಷಗಳಲ್ಲಿ ಹೆಚ್ಚಿನ ಕಿತ್ತಾಟ, ಅಧಿಕಾರದ ದಾಹ ಇರುವುದಿಲ್ಲ. ನಮ್ಮ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿಸದ್ಯಕ್ಕೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಅಧಿಕಾರ ಅನುಭವಿಸುತ್ತಿದ್ದಾರೆ. ಅಧಿಕಾರದಿಂದ ದೂರ ಉಳಿದವರು ಅಧಿಕಾರದ ದಿನಗಳಿಗೆಕಾಯುತ್ತಿದ್ದಾರೆ. ಆದರೆ, ಪ್ರತಿಪಕ್ಷಗಳೆನಿಸಿಕೊಂಡಿರುವ ಭಾರತೀಯ ಜನತಾ ಪಕ್ಷ ಭಾರತೀಯ ಜಗಳ ಪಕ್ಷವಾಗಿ ಮಾರ್ಪಟ್ಟಿದ್ದರೆ, ಹುಟ್ಟಿನಿಂದಲೇಜಗಳವನ್ನು ಸೆರಗಿನಲ್ಲಿಟ್ಟುಕೊಂಡು ಬಂದಿರುವ ಜನತಾ ಪರಿವಾರದ ಕುಡಿ ಜಾತ್ಯತೀತ ಜನತಾದಳವೆಂಬ ಕುಲುಮೆಯಲ್ಲಿ ಭಿನ್ನಮತ ಕುದಿಯುತ್ತಿದೆ. 

ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಬಿಜೆಪ ಎದುರಿಸುತ್ತಿರುವ ಈ ಸಂದಿಗ್ಧದ ಪರಿಸ್ಥಿತಿಯನ್ನು ಹಿಂದೆ ಎದುರಿಸಿರಲಿಲ್ಲ. ಪಕ್ಷದಲ್ಲಿಒಂದೊಮ್ಮೆ ರಾಮ- ಲಕ್ಷ್ಮಣರೆನಿಸಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಅವರು ಇಂದು ಉತ್ತರ- ದಕ್ಷಿಣದಂತಾಗಿದ್ದಾರೆ.

ಅವರಿಬ್ಬರ ನಡುವಿನ ವೈಮನಸ್ಯ ಈಗ ಹಾದಿರಂಪ- ಬೀದಿರಂಪವಾಗಿ ಪರಿಣಮಿಸಿದೆ.

ಇಂತಹ ಪರಿಸ್ಥಿತಿಗೆ ಬರಲು ಮೂಲಕಾರಣ ಯಡಿಯೂರಪ್ಪ ಅವರೇ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. 

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು ಎಂಬ ಕಾರಣಕ್ಕೆ ತಾವೇ ನೀರು ಗೊಬ್ಬರ ಹಾಕಿ ಬೆಳೆಸಿದ ಪಕ್ಷವನ್ನು ತೊರೆದು ಕೆಜೆಪಿ ಕಟ್ಟಿಕೈಸುಟ್ಟುಕೊಂಡು ಬಂದ ಯಡಿಯೂರಪ್ಪ ಅವರಿಗೆ ಪಕ್ಷ ದ್ರೋಹ ಮಾಡಲಿಲ್ಲ. ಪಕ್ಷಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಅಧ್ಯಕ್ಷ ಸ್ಥಾನವೆಂಬ ಉನ್ನತಹುದ್ದೆಯನ್ನೂ ನೀಡಿತು.

ಇದು ಸಿಕ್ಕಿದ್ದೇ ತಡ ಯಡಿಯೂರಪ್ಪ ಸುತ್ತಮುತ್ತಲಿನ ಬೆಂಬಲಿಗರೆಂಬ ಬೇರುಗಳು ಗಟ್ಟಿಯಾಗತೊಡಗಿದವು. ಬಹುತೇಕ ಈ ಬೇರುಗಳೆಲ್ಲಾಯಡಿಯೂರಪ್ಪ ಅವರ ಜತೆಗೆ ಕೆಜೆಪಿಗೆ ಹೋಗಿ ವಾಪಸ್ ಬಂದಂತಹವು. ಪಕ್ಷದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ನೇಮಕಾತಿಯಲ್ಲಿ ಇವರದ್ದೇ ಕೈಮೇಲಾಯಿತು. 

ಅದುವರೆಗೆ ಕಾಂಗ್ರೆಸ್ ಗೆ ಮಾತ್ರ ಇದ್ದ ಮೂಲ ಮತ್ತು ವಲಸಿಗರು ಎಂಬ ಹಣೆಪಟ್ಟಿ ಬಿಜೆಪಿಯನ್ನೂ ವಕ್ಕರಿಸಿತು.

ಆಗಲೇ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದದ್ದು. ಯಡಿಯೂರಪ್ಪ ತಮ್ಮ ಬೆಂಬಲಿಗರ ಪರ ವಕಾಲತ್ತುವಹಿಸಿದರೆ, ಈಶ್ವರಪ್ಪ ಮೂಲ ಬಿಜೆಪಿ ಕಾರ್ಯಕರ್ತರ ಪರವಾಗಿ ಹೋರಾಟ ಮಾಡುತ್ತೇನೆಂದು ಸೆಡ್ಡು ಹೊಡೆದು ನಿಂತಿದ್ದಾರೆ.

ಇದಕ್ಕೆ ವೇದಿಕೆಯಾಗಿ ರಾಯಣ್ಣ ಬ್ರಿಗೇಡ್ ಸದ್ದು ಮಾಡುತ್ತಲೇ ಬರುತ್ತಿದೆ. ಈ ಸದ್ದು ಜೋರಾದಾಲೆಲ್ಲಾ ಪಕ್ಷದ ರಾಷ್ಟ್ರೀಯ ನಾಯಕರರಂಗಪ್ರವೇಶವಾಗಿ ತೇಪೆ ಹಾಕುವ ಕೆಲಸ ನಡೆಯುತ್ತಲೇ ಬಂದಿದೆ. ಆದರೆ, ಬ್ರಿಗೇಡ್ ನ ಗುಟುರು ಮಾತ್ರ ನಿಂತಿಲ್ಲ.

ಹೀಗೆ ಹಲವು ಬಾರಿ ಈ ಇಬ್ಬರು ನಾಯಕರನ್ನು ಸಮಾಧಾನಪಡಿದ್ದೂ ಆಗಿದೆ. ಒಂದೊಮ್ಮೆ ದೆಹಲಿಯಲ್ಲಿ ಇವರಿಬ್ಬರನ್ನು ಕರೆಸಿಕೊಂಡಿದ್ದಹೈಕಮಾಂಡ್ ಟಿವಿ ಕ್ಯಾಮೆರಾಗಳ ಮುಂದೆ ನಿಲ್ಲಿಸಿ ಇಬ್ಬರನ್ನೂ ಪರಸ್ಪರ ತಬ್ಬಿಕೊಳ್ಳುವಂತೆ ಫೋಸ್ ಕೊಡಿಸಿತ್ತು. ಅದಾದ ಕೆಲವೇ ಗಂಟೆಗಳಲ್ಲಿಇಬ್ಬರೂ ಬೆಂಗಳೂರಿಗೆ ವಿಮಾನ ಹತ್ತಿದ್ದು ಮಾತ್ರ ಬೇರೆ ಬೇರೆ ಆಗಿಯೇ!

ಈಗ ಮಗದೊಮ್ಮೆ ಇವರಿಬ್ಬರ ಜಗಳ ತಾರಕಕ್ಕೇರಿದೆ. ಇಂದು ಮೈಸೂರಿನಲ್ಲಿ ಮುಕ್ತಾಯಗೊಂಡ ಕಾರ್ಯಕಾರಿಣಿಗೆ ಪರ್ಯಾಯವಾಗಿ ಈಶ್ವರಪ್ಪಬ್ರಿಗೇಡ್ ಸಭೆ ಮಾಡಲು ಹೊರಟಿದ್ದರು. ಕಡೆಯ ಕ್ಷಣದವರೆಗೂ ಸಭೆಯ ಸಿದ್ಧತೆಗಳನ್ನೂ ನಡೆಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಪಕ್ಷದ ಹಿರಿಯರಸಲಹೆಯಂತೆ ಕಾರ್ಯಕಾರಿಣಿಗೆ ಬಂದರು, ಹೋದರು. ಛಲ ಬಿಡದ ತ್ರಿವಿಕ್ರಮನಂತೆ ಬ್ರಿಗೇಡ್ ಮಾತ್ರ ಬಿಡುವುದಿಲ್ಲ ಎಂಬುದನ್ನು ಹೇಳಲುಮರೆಯಲಿಲ್ಲ ಈಶ್ವರಪ್ಪ.

ಈ ಭಿನ್ನಮತ ಭವಿಷ್ಯದಲ್ಲಿ ಪಕ್ಷಕ್ಕೆ ಈ ಹಿಂದೆ ಕೆಜೆಪಿ ಹುಟ್ಟಿಕೊಂಡಾಗ ಆದ ನಷ್ಟಕ್ಕಿಂತ ಹೆಚ್ಚು ನಷ್ಟವಾಗಲಿದೆ ಎಂಬುದನ್ನು ಮುಖಂಡರು ಅರಿತಿದ್ದಾರೆ. ಈ ಮುಖಂಡರಲ್ಲೇ ಕೆಲವರು ಇಬ್ಬರನ್ನೂ ಕೂರಿಸಿ ರಾಜಿ ಮಾಡಿಸು ತಾಕತ್ತು ಉಳ್ಳವರು. ಆದರೆ, ಆ ಕೆಲಸಕ್ಕೆ ಕೈ ಹಾಕುತ್ತಿಲ್ಲ. ಏಕೆಂದರೆ, ಅವಸರವಸರದಿಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಕೈಸುಟ್ಟುಕೊಂಡಾಗಿದೆ. ಇದರಿಂದಲೇ ಯಡಿಯೂರಪ್ಪಮತ್ತು ಅವರ ಬೆಂಬಲಿಗರ ಕೈ ಮೇಲಾಗಿದ್ದು, ಸಾಮಾನ್ಯ ಕಾರ್ಯಕರ್ತ, ನಾಯಕರಿಗೆ ಮನ್ನಣೆಯೇ ಇಲ್ಲದಂತಾಗಿದೆ. ಈ ಆಟಾಟೋಪವನ್ನು ಮಟ್ಟಹಾಕಲು ಈ ಭಿನ್ನಮತ ಜೀವಂತವಾಗಿರಬೇಕೆಂದು ಬಯಸಿದ್ದಾರೆ. ಈ ಕಾರಣದಿಂದಲೇ ಆಗೊಮ್ಮೆ ಈಗೊಮ್ಮೆ ತೇಪೆ ಹಾಕುವ ಕೆಲಸ ಮಾಡಿಕೈತೊಳೆದುಕೊಳ್ಳುತ್ತಿದ್ದಾರೆ. 

ಹಾಗಾದರೆ, ಯಡಿಯೂರಪ್ಪ ಅವರ ಮಿಷನ್ ೧೫೦ ಕತೆ ಏನು ಎಂಬ ಪ್ರಶ್ನೆ ಸಾಮಾನ್ಯ ಕಾರ್ಯಕರ್ತರನ್ನು ಕಾಡುತ್ತಿದೆ. ಪಕ್ಷದಲ್ಲಿ ಇದೇರೀತಿಮುಂದುವರೆದರೆ ೧೫೦ ಸೀಟಿಗೆ ಬದಲು ಮತ್ತೆ ವಿರೋಧ ಪಕ್ಷದ ಸ್ಥಾನವೇ ಗತಿ ಎಂಬ ಉತ್ತರ ಅವರ ಬಳಿಯೂ ಇದೆ. 

ಆದರೆ, ಕಚ್ಚಾಡುತ್ತಿರುವವರಿಗೆ ಮಾತ್ರ ನಾ ಮೇಲು, ನಾಮೇಲು ಎಂದು ಜಿದ್ದಾಜಿದ್ದಿಗೆ ಬಿದ್ದಿದ್ದಾರೆ.  

ಒಂದು ಕಡೆ, ನಾನು ಸಿಎಂ ಆಗಿಯೇ ಬಿಟ್ಟಿದ್ದೇನೆ ಎಂಬ ಭ್ರಮಾಲೋಕದಲ್ಲಿ ಯಡಿಯೂರಪ್ಪ ತೇಲುತ್ತಿದ್ದರೆ, ಇನ್ನೊಂದೆಡೆ ಯಡಿಯೂರಪ್ಪ ಅವರನ್ನುಮುಖ್ಯಮಂತ್ರಿ ಮಾಡಿಯೇ ತೀರುತ್ತೇವೆ ಎಂದು ಹೇಳಿಕೊಳ್ಳುತ್ತಲೇ ಬ್ರಿಗೇಡ್ ಮೂಲಕ ಅದೇ ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆಯುತ್ತಿರುವಈಶ್ವರಪ್ಪ. ಇವರಿಬ್ಬರ ನಡುವೆ ನಮ್ಮ ಬೆಂಬಲ ಯಾರಿಗೆ ಎಂಬ ಗೊಂದಲದಲ್ಲಿರುವ ಕಾರ್ಯಕರ್ತರು.

ಈ ಎಲ್ಲದರ ನಡುವೆ ಹಲವಾರು ಚುನಾವಣೆಗಳನ್ನು ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ.

ರಾಜ್ಯದ ಪಕ್ಷದ ಬೆಳವಣಿಗೆ ಇದೇ ರೀತಿ ಮುಂದುವರೆದರೆ ಅವರ ಈ ಹುಮ್ಮಸ್ಸಿಗೆ ತಣ್ಣೀರೆರಚದೇ ಇರಲಾರದು. ಅದೇರೀತಿ ಮಿಷನ್ ೧೫೦ ಎಂಬಮೂರಂಕಿಯ ಗುರಿ ತಪ್ಪಿ ಎರಡಂಕಿ ತಲುಪಿದರೆ ಆಶ್ಚರ್ಯವಿಲ್ಲ. ಕಡೆಗೆ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಆಗುವುದರಲ್ಲಿಯೂ ಅನುಮಾನವಿಲ್ಲ.

Related Articles